ಹೊಸ ಬಾಟಲಿಯಲ್ಲಿ ಹಳೆಯ ವೈನ್ ಉಲ್ಟಾ ಹೊಡೆಯಿತು - ‘ಧಮಾಲ್ 4’ ಚಿತ್ರದಲ್ಲಿ ನಗುವಿಗಿಂತ ತಲೆನೋವೇ ಜಾಸ್ತಿ!!

By Kavya Prasad Published: Jul 11, Saturday, 2026, 16:58 [IST]

ಬಾಲಿವುಡ್‌ನಲ್ಲಿ ಒಂದು ಕಾಲದಲ್ಲಿ ಕಚಗುಳಿ ಇಡುವ ಕಾಮಿಡಿ ಚಿತ್ರಗಳಿಗೆ ಬರವಿರಲಿಲ್ಲ. ವಿಶೇಷವಾಗಿ 'ಧಮಾಲ್' ಸರಣಿಯ ಮೊದಲ ಎರಡು ಚಿತ್ರಗಳು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ ಗುಣಮಟ್ಟ ಕುಸಿಯುತ್ತಿದ್ದು, ಹಳೆಯ ಯಶಸ್ಸಿನ ಬಲದಲ್ಲೇ ಹೊಸ ಚಿತ್ರಗಳನ್ನು ತರುವ ಪ್ರಯತ್ನಗಳು ವಿಫಲವಾಗುತ್ತಿವೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆಯೇ ‘ಧಮಾಲ್ 4’. ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿ, ನಗುವಿನ ಹೆಸರಿನಲ್ಲಿ ತಲೆನೋವನ್ನು ತಂದೊಡ್ಡುವ ಪ್ರಯತ್ನವೇ ಈ ಸಿನಿಮಾ.

https://www.imdb.com/title/tt27548557/

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, 'ಧಮಾಲ್ 4' ಹೊಸ ಬಾಟಲಿಯಲ್ಲಿನ ಹಳೆಯ ವೈನ್. ಆದರೆ, ಸಾಮಾನ್ಯವಾಗಿ ವೈನ್ ಹಳೆಯದಾದಷ್ಟು ರುಚಿ ಹೆಚ್ಚುತ್ತದೆ, ಇಲ್ಲಿ ಪರಿಸ್ಥಿತಿ ಉಲ್ಟಾ! 2007ರಲ್ಲಿ ಬಂದ ಮೊದಲ 'ಧಮಾಲ್' ಚಿತ್ರದ ಕಥಾಹೂರಣವೇ ಇಲ್ಲೂ ಇದೆ. ನಿಧಿ, ದುರಾಸೆ ಮತ್ತು ಗೊಂದಲಗಳ ಸುತ್ತಲೇ ಸಿನಿಮಾ ಸುತ್ತುತ್ತದೆ. ಆದರೆ ಮೊದಲ ಚಿತ್ರದಲ್ಲಿ ಸಿಕ್ಕಿದ್ದ ಆ ಸಹಜವಾದ ಮಜಾ ಅಥವಾ ಹಾಸ್ಯದ ಕಿಕ್ ಇಲ್ಲಿ ಅಣುವಿನಷ್ಟೂ ಸಿಗುವುದಿಲ್ಲ.

ಶೈತಾನ್ ಸಿಂಗ್ ಬಚ್ಚಿಟ್ಟಿರುವ ನಿಧಿಯ ನಕ್ಷೆಗಾಗಿ ರವಿಕಿಶನ್ ಅಲಿಯಾಸ್ ಅಧೂರಾ ಎಂಬ ವಿಲನ್, ಪೃಥ್ವಿಯನ್ನು ಕಿರುಕುಳ ನೀಡುತ್ತಿರುತ್ತಾನೆ. ಅವನಿಂದ ಪೃಥ್ವಿಯನ್ನು ಪಾರು ಮಾಡಲು ಅಜಯ್ ದೇವಗನ್ (ಗುಡ್ಡು) ಎಂಟ್ರಿಯಾಗುತ್ತಾರೆ. ಇತ್ತ, ಶ್ರೀಮಂತ ಹುಡುಗಿಯನ್ನು ಮದುವೆಯಾಗಬೇಕೆಂದು ಕನಸು ಕಾಣುವ ಲಲ್ಲನ್ (ರಿತೇಶ್ ದೇಶಮುಖ್) ಪಾತ್ರ, ಅಂಜಲಿ ಆನಂದ್ (ಪಾರೋ) ಕೈಯಲ್ಲಿ ಸಿಕ್ಕಿ ಒದ್ದಾಡುತ್ತಾನೆ. ಮತ್ತೊಂದೆಡೆ, ಮಾನವ್ (ಜಾವೇದ್ ಜಾಫ್ರಿ) ಮತ್ತು ಆದಿ (ಅರ್ಷದ್ ವಾರ್ಸಿ) ತಮ್ಮ ಕಿತಾಪತಿಗಳಿಂದಲೇ ಸಂಸಾರದಲ್ಲಿ ಬಿರುಕು ಮೂಡಿಸಿಕೊಂಡಿರುತ್ತಾರೆ. ಇವರೆಲ್ಲರೂ ಕೊನೆಗೆ ಆ ನಿಧಿಯ ಹಿಂದೆ ಬಿದ್ದಾಗ ನಡೆಯುವ ಅತಿರೇಕದ ವಿದ್ಯಮಾನಗಳೇ ಈ ಚಿತ್ರದ ಕಥಾವಸ್ತು.

ಈ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಪ್ಲಸ್ ಪಾಯಿಂಟ್‌ಗಳೇ ಇಲ್ಲ ಎನ್ನುವುದು ದುರಂತ. ಬರವಣಿಗೆಯಲ್ಲಿ ಯಾವುದೇ ಮ್ಯಾಜಿಕ್ ಇಲ್ಲ. ದೃಶ್ಯಗಳ ನಡುವೆ ಕನೆಕ್ಷನ್ ಇಲ್ಲ, ಲಾಜಿಕ್ ಇಲ್ಲ. ಇನ್ನು ಹಾಸ್ಯ ಚಿತ್ರ ಅಂದ್ಮೇಲೆ ಸಂಭಾಷಣೆಗಳು ನಗೆಬುಗ್ಗೆ ಉಕ್ಕಿಸಬೇಕು, ಆದರೆ ಇಲ್ಲಿ ಬಂಟಿ ರಾಥೋಡ್ ಬರೆದಿರುವ ಡೈಲಾಗ್‌ಗಳು ಪ್ರೇಕ್ಷಕರಿಗೆ ಕಿರಿಕಿರಿ ಉಂಟುಮಾಡುತ್ತವೆ.

ಅತ್ಯಂತ ಬೇಸರದ ಸಂಗತಿಯೆಂದರೆ ಬಾಡಿ ಶೇಮಿಂಗ್ (Body Shaming). ಹಾಸ್ಯದ ಹೆಸರಿನಲ್ಲಿ ಒಬ್ಬರ ದೇಹಾಕೃತಿಯನ್ನು ಹಂಗಿಸುವುದು ಇಲ್ಲಿನ ಪ್ರಮುಖ ತಂತ್ರವಾಗಿ ಬಳಕೆಯಾಗಿದೆ. ಅಂಜಲಿ ಆನಂದ್ ಅವರ ದೈಹಿಕ ಆಕಾರದ ಮೇಲೆ ಬರೆದಿರುವ ಸಂಭಾಷಣೆಗಳು ಹಾಗೂ ಅವರನ್ನು ಚಿತ್ರಿಸಿರುವ ರೀತಿ ಅತ್ಯಂತ ಕೀಳುಮಟ್ಟದ್ದಾಗಿದೆ. "ಹರಿದು ಹೋಗಿರುವ ಪೈಜಾಮ"ದಂತಹ ಸಂಭಾಷಣೆಗಳು ಹಾಸ್ಯವಾಗದೆ ಅಸಹ್ಯ ಹುಟ್ಟಿಸುತ್ತವೆ.

ಸಿನಿಮಾ ಆರಂಭವಾದ 20 ನಿಮಿಷಗಳ ನಂತರ, ಪ್ರೇಕ್ಷಕರಿಗೆ ತಾವು ತಪ್ಪು ಸಿನಿಮಾ ಆಯ್ಕೆ ಮಾಡಿಕೊಂಡೆವು ಎಂದು ಅನ್ನಿಸುತ್ತದೆ. ಅಮರ್ ಮೋಹಿಲೆ ಅವರ ಹಿನ್ನೆಲೆ ಸಂಗೀತ, ಕಿವಿಗೆ ಇಂಪಾಗುವ ಬದಲು ಅಬ್ಬರ ಮತ್ತು ಕರ್ಕಶವಾಗಿ ಕೇಳಿಸುತ್ತದೆ. ಅಷ್ಟೇ ಅಲ್ಲದೆ, ಚಿತ್ರದ ದೃಶ್ಯಗಳ ಮೇಲೆ ಎಐ (AI) ಮೂಲಕ ಸೃಷ್ಟಿಸಿರುವ ಪ್ರಾಣಿಗಳು ಮತ್ತು ಕಳಪೆ ಗ್ರಾಫಿಕ್ಸ್, ಸಿನಿಮಾ ನೋಡುವಾಗ ಒಂದು ಅನಿಮೇಟೆಡ್ ಕಾರ್ಟೂನ್ ನೋಡುತ್ತಿದ್ದೇವಾ ಎಂಬ ಅನುಮಾನ ಮೂಡಿಸುತ್ತದೆ. ವಿಶುವಲ್ ಎಫೆಕ್ಟ್ಸ್‌ನಲ್ಲಿ ಸಂಪೂರ್ಣ ವಿಫಲವಾಗಿರುವ ಈ ಚಿತ್ರ, ಕಣ್ಣಿಗೆ ಯಾವುದೇ ರೀತಿಯ ಹಬ್ಬವನ್ನೂ ನೀಡುವುದಿಲ್ಲ.

ಇಡೀ ಚಿತ್ರದಲ್ಲಿ ರಿತೇಶ್ ದೇಶಮುಖ್ ಒಬ್ಬರು ಮಾತ್ರ ತುಸು ಗಮನ ಸೆಳೆಯುತ್ತಾರೆ. ಪಾತ್ರದಲ್ಲಿನ ಅಸಹಾಯಕತೆ ಮತ್ತು ತೀಕ್ಷ್ಣತೆಯನ್ನು ಅವರು ಚೆನ್ನಾಗಿ ನಿರ್ವಹಿಸಿದ್ದಾರೆ. ಅಜಯ್ ದೇವಗನ್ ಅವರ ಅಭಿನಯ ನೀರಸವಾಗಿದೆ. 'ಧಮಾಲ್' ಸರಣಿಯ ಜೀವಾಳವಾಗಿದ್ದ ಅರ್ಷದ್ ವಾರ್ಸಿ ಮತ್ತು ಜಾವೇದ್ ಜಾಫ್ರಿ ಅವರ ಕೆಮಿಸ್ಟ್ರಿಯನ್ನು ಈ ಬಾರಿ ಕಳಪೆ ಬರವಣಿಗೆ ಸಂಪೂರ್ಣ ಹಾಳುಮಾಡಿದೆ. ಸಂಜಯ್ ಮಿಶ್ರಾ ಅವರಂತಹ ಅದ್ಭುತ ಕಲಾವಿದರನ್ನು ಕೇವಲ "ಬ್ರೋ ಬ್ರೋ" ಎನ್ನುವ ಕಿರಿಕಿರಿಯ ಪಾತ್ರಕ್ಕೆ ಸೀಮಿತಗೊಳಿಸಿರುವುದು ನೋವಿನ ಸಂಗತಿ.

'ಧಮಾಲ್ 4' ಬಾಲಿವುಡ್‌ನ ಅವನತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹಳೆಯ ಸಿನಿಮಾಗಳ ನೆನಪುಗಳನ್ನು ತಾಜಾಗೊಳಿಸುವ ಪ್ರಯತ್ನ ನಡೆದಿದೆಯಾದರೂ, ಅವೇ ಹಳೆಯ ಚಿತ್ರಗಳೇ ಈ ಹೊಸ ಚಿತ್ರಕ್ಕಿಂತ ಎಷ್ಟೋ ಪಟ್ಟು ಮೇಲು ಎನಿಸುತ್ತದೆ. ಒಟ್ಟಾರೆಯಾಗಿ, ಈ ಸಿನಿಮಾ ನಿಮ್ಮ ಸಮಯ ಮತ್ತು ಹಣಕ್ಕೆ ದ್ರೋಹ ಬಗೆಯುತ್ತದೆ. ಇಂತಹ ಔಟ್ ಡೇಟೆಡ್ ಕಥೆಗಳನ್ನು ನಂಬಿ ಚಿತ್ರಮಂದಿರಕ್ಕೆ ಹೋಗುವ ಬದಲು, ಮನೆಯಲ್ಲಿ ಹಳೆಯ 'ಧಮಾಲ್' ಚಿತ್ರಗಳನ್ನೇ ಒಮ್ಮೆ ಮತ್ತೆ ನೋಡುವುದು ಉತ್ತಮ.

Dhamaal

Comments

Sign in to comment
Please to leave a comment on this article.
Top Stories
Subscribe to Our Newsletter

Get the latest articles delivered to your inbox.

Rakul Preet Singh Enjoys a Lovely Outing with Her Boyfriend
Rakul Preet Singh Enjoys a Lovely Outing with Her Boyfriend