ಕನ್ನಡ ಚಿತ್ರರಂಗದ ಧ್ರುವತಾರೆ, ಕೋಟಿಗಟ್ಟಲೆ ಅಭಿಮಾನಿಗಳ ಆರಾಧ್ಯ ದೈವ, 'ಸೆಂಚುರಿ ಸ್ಟಾರ್' ಶಿವರಾಜ್‌ಕುಮಾರ್ ಅವರು ಇದೀಗ 64ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಪ್ಪಟ ಅಭಿಮಾನಿಗಳ ಪ್ರೀತಿ, ಆಪ್ತರ ಶುಭಾಶಯಗಳ ನಡುವೆ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಶಿವಣ್ಣ ಅವರ ಅಭಿಮಾನಿಗಳಿಗೆ ಹೊಸ ಹೊಸ ಸಿನಿಮಾಗಳ ಘೋಷಣೆ ಮತ್ತು ಟೀಸರ್‌ಗಳ ಭರ್ಜರಿ ಉಡುಗೊರೆ ಸಿಕ್ಕಿದೆ.

'ಘೋಸ್ಟ್' ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಿರ್ದೇಶಕ ಶ್ರೀನಿ ಮತ್ತು ಶಿವಣ್ಣನವರ ಜೋಡಿ ಮತ್ತೆ ಒಂದಾಗಿದೆ. ಈ ಬಾರಿ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಚಿತ್ರ 'ಎ ಫಾರ್ ಆನಂದ್'. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಚಿತ್ರದ ಸಣ್ಣ ಝಲಕ್ ಅಥವಾ ಟೀಸರ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಈ ಟೀಸರ್ ಅತ್ಯಂತ ಫನ್ನಿ ಹಾಗೂ ಕುತೂಹಲಕಾರಿ ಆಗಿದೆ. ಟೀಸರ್‌ನಲ್ಲಿ ಶಿವಣ್ಣ ಮತ್ತು ಶ್ರೀನಿ ಅವರ ನಡುವಿನ ಸಂಭಾಷಣೆ ನಗುವನ್ನು ಉಕ್ಕಿಸುತ್ತದೆ. ಶ್ರೀನಿ ತಂದ ಸ್ಕ್ರಿಪ್ಟ್‌ನಲ್ಲಿ ಶಿವಣ್ಣ ಕೆಲ ಬದಲಾವಣೆಗಳನ್ನು ಕೇಳಿರುತ್ತಾರೆ. ಆದರೆ, ಶ್ರೀನಿ ಆ ಸ್ಕ್ರಿಪ್ಟ್ ಅನ್ನು ಗೀತಕ್ಕ ಅವರ ಮುಂದೆ ಮಂಡಿಸುವಾಗ ಅಸಲಿ ಮ್ಯಾಟರ್ ರಿವೀಲ್ ಮಾಡುತ್ತಾರೆ. "ತಮನ್ನಾ ಜೊತೆ ಒಂದು ರೇನ್ ಡ್ಯಾನ್ಸ್ ಬೇಕು, ರವಿಚಂದ್ರನ್ ಸರ್ ಅವರಿಂದ ಕೊರಿಯೋಗ್ರಫಿ ಮಾಡಿಸಬೇಕು, ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಬೇಕು" ಎಂದು ಶಿವಣ್ಣ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ಶ್ರೀನಿ ಹೇಳುತ್ತಿದ್ದಂತೆಯೇ, ಗೀತಕ್ಕನ ಮುಂದೆ ಶಿವಣ್ಣ ಪೇಚಿಗೆ ಸಿಲುಕುತ್ತಾರೆ.
ಗೀತಕ್ಕ ಅವರಿಗೆ ತಕ್ಷಣ ಟಿಶ್ಯು ಕೊಟ್ಟು "ಬೆವರು ಒರೆಸಿಕೊಳ್ಳಿ" ಎಂದು ಹೇಳುವ ಸನ್ನಿವೇಶ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಇದು ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ, ಬದಲಾಗಿ ಒಬ್ಬ 'ಸ್ಕೂಲ್ ಮಾಸ್ಟರ್' ಕಥೆ ಎಂಬುದು ಟೀಸರ್ ಮೂಲಕ ಸ್ಪಷ್ಟವಾಗಿದೆ. ಕೈಯಲ್ಲಿ ಸ್ಕೇಲ್ ಹಿಡಿದು ಶಿವಣ್ಣ ಶಾಲಾ ಶಿಕ್ಷಕರ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಾಸುಕಿ ವೈಭವ್ ಸಂಗೀತ ಮತ್ತು ಮಹೇನ್ ಸಿಂಹ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಹುಟ್ಟುಹಬ್ಬದ ದಿನವೇ ಮತ್ತೊಂದು ದೊಡ್ಡ ಘೋಷಣೆ ಹೊರಬಿದ್ದಿದೆ. 'ಜೇಮ್ಸ್' ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ನಿರ್ಮಾಣದಲ್ಲಿ, ಬಹದ್ದೂರ್ ಚೇತನ್ ನಿರ್ದೇಶನದಲ್ಲಿ ಶಿವಣ್ಣ ನಟಿಸಲಿರುವ ಹೊಸ ಚಿತ್ರಕ್ಕೆ 'ಜೆಜೆ ರಾಯ್' ಎಂದು ಟೈಟಲ್ ಇಡಲಾಗಿದೆ. ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕರು ಮತ್ತು ಶಿವಣ್ಣನವರ ಈ ಹೊಸ ಕಾಂಬಿನೇಷನ್ ಮೇಲೆ ಭಾರೀ ನಿರೀಕ್ಷೆಗಳಿವೆ.
ಕೇವಲ ಹೊಸ ಘೋಷಣೆಗಳಷ್ಟೇ ಅಲ್ಲದೆ, ಶಿವಣ್ಣ ನಟನೆಯ ಬಹುನಿರೀಕ್ಷಿತ ಚಿತ್ರಗಳ ಬಿಡುಗಡೆ ದಿನಾಂಕಗಳೂ ಹೊರಬಿದ್ದಿವೆ. ಪವನ್ ಒಡೆಯರ್ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ 'ಬೇಲ್' ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೊಸ ಪೋಸ್ಟರ್ ಮೂಲಕ ಖಚಿತಪಡಿಸಿದೆ. ಈ ಸಿನಿಮಾದ ಮೇಲಿನ ಅಭಿಮಾನಿಗಳ ಕುತೂಹಲ ಇಮ್ಮಡಿಗೊಂಡಿದೆ.
ಇಷ್ಟೇ ಅಲ್ಲದೆ, 'ಸರ್ವೈವರ್' ಡಾಕ್ಯುಮೆಂಟರಿ ಪ್ರೋಮೊ ಕೂಡ ಬಿಡುಗಡೆಯಾಗಿದೆ. ಶಿವಣ್ಣ ಅವರ ಕೆಲಸದ ವೈಖರಿ ಮತ್ತು ಅವರ ವ್ಯಕ್ತಿತ್ವವನ್ನು ಹತ್ತಿರದಿಂದ ನೋಡಬಯಸುವವರಿಗೆ ಇದು ದೊಡ್ಡ ಕೊಡುಗೆ ಎನ್ನಬಹುದು. ಶಿವಣ್ಣ ಅವರು ತಮ್ಮ 64ನೇ ಹುಟ್ಟುಹಬ್ಬವನ್ನು ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ದುನಿಯಾ ವಿಜಯ್ ಕೂಡ ಆಗಮಿಸಿ ಶಿವಣ್ಣನಿಗೆ ಶುಭಾಶಯ ಕೋರಿದರು.
ಶಿವಣ್ಣ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕೇವಲ ನಟನಲ್ಲ, ಅವರು ಒಂದು ಶಕ್ತಿ. 64ನೇ ವಯಸ್ಸಿನಲ್ಲೂ ಅವರು ತೋರಿಸುತ್ತಿರುವ ಉತ್ಸಾಹ ಯುವ ನಟರಿಗೆ ಮಾದರಿಯಾಗಿದೆ. ವಿಭಿನ್ನ ಪಾತ್ರಗಳು, ಪ್ರಯೋಗಾತ್ಮಕ ಸಿನಿಮಾಗಳು ಮತ್ತು ನವ ನಿರ್ದೇಶಕರಿಗೆ ಪ್ರೋತ್ಸಾಹ ನೀಡುವ ಅವರ ಗುಣ ಸ್ಯಾಂಡಲ್‌ವುಡ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ.
'ಎ ಫಾರ್ ಆನಂದ್' ಮೂಲಕ ಶಾಲಾ ಮಾಸ್ಟರ್ ಆಗಿ, 'ಜೆಜೆ ರಾಯ್' ಮೂಲಕ ಹೊಸ ಅವತಾರದಲ್ಲಿ ಮತ್ತು 'ಬೇಲ್' ಮೂಲಕ ಮಾಸ್ ಎಂಟರ್ಟೈನರ್ ಆಗಿ ಶಿವಣ್ಣ ಕನ್ನಡಿಗರನ್ನು ರಂಜಿಸಲು ಸಜ್ಜಾಗಿದ್ದಾರೆ. ಅವರ ಮುಂದಿನ ಎಲ್ಲಾ ಪ್ರಾಜೆಕ್ಟ್‌ಗಳು ಯಶಸ್ವಿಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
Comments
Please to leave a comment on this article.