ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ 'ಕರಾವಳಿ' - ಜುಲೈ 24ರ ಬಿಡುಗಡೆಗೆ ಸಜ್ಜಾದ ಡೈನಾಮಿಕ್ ಪ್ರಿನ್ಸ್ ಮತ್ತು ರಾಜ್ ಬಿ. ಶೆಟ್ಟಿ!!

By Kavya Prasad Published: Jul 16, Thursday, 2026, 12:04 [IST]

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಕರಾವಳಿ', ತನ್ನ ಪ್ರಚಾರದ ಶೈಲಿ ಮತ್ತು ಸಂಗೀತದ ಮೂಲಕವೇ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಟ್ರೈಲರ್ ಮೂಲಕ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿರುವ ಈ ಸಿನಿಮಾ, ಜುಲೈ 24ರಂದು ಅದ್ದೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪವರ್‌ಫುಲ್ ಹಾಡು 'ಓಡಾ...' ಇದೀಗ ಸಂಗೀತ ಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿದೆ.

ಮೈ ಜುಮ್ ಎನಿಸುವ ಸಂಗೀತದ ಜೋಷ್

'ಓಡಾ...' ಹಾಡು ಕೇಳುಗರ ಮೈಯಲ್ಲಿ ಜೋಷ್ ತುಂಬುವಂತಿದೆ. ಈ ಹಾಡಿನ ರಿದಮ್ ಮತ್ತು ಸಂಗೀತ ಸಂಯೋಜನೆ ಅಷ್ಟೊಂದು ತೀವ್ರತೆಯಿಂದ ಕೂಡಿದೆ. ಮಲಯಾಳಂನ ಸೂಪರ್ ಹಿಟ್ ಚಿತ್ರಗಳಾದ 'ಕಿಂಗ್ ಆಫ್ ಕೋಥ', 'ಎಂಪರಾನ್' ಮತ್ತು 'ಕರುಪು' ಸೇರಿದಂತೆ ಹಲವು ಜನಪ್ರಿಯ ಹಾಡುಗಳಿಗೆ ತನ್ನ ಕಂಠಸಿರಿಯಿಂದ ಜೀವ ತುಂಬಿರುವ ಖ್ಯಾತ ಗಾಯಕ ಆನಂದ್ ಶ್ರೀರಾಜ್, ಇದೀಗ 'ಓಡಾ...' ಹಾಡಿಗೆ ಧ್ವನಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರ ಪವರ್‌ಫುಲ್ ಗಾಯನವು ಹಾಡಿನ ಗಂಭೀರತೆ ಮತ್ತು ಆವೇಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.

ತಾಂತ್ರಿಕ ತಂಡದ ಕೌಶಲ್ಯ

ಈ ಹಾಡಿಗೆ ಸಾಹಿತ್ಯದ ಮೆರುಗು ನೀಡಿರುವುದು ಪ್ರಮೋದ್ ಮರವಂತೆ. ಸನ್ನಿವೇಶಕ್ಕೆ ತಕ್ಕಂತೆ ಪದಗಳನ್ನು ಹೆಣೆದಿರುವ ಅವರ ಶೈಲಿ ಪ್ರೇಕ್ಷಕರಿಗೆ ಕಥೆಯ ಎಳೆಗಳ ಬಗ್ಗೆ ಕುತೂಹಲ ಮೂಡಿಸುತ್ತದೆ. ಇನ್ನು ಸಂಗೀತ ಸಂಯೋಜನೆ ಮಾಡಿರುವ ಸಚಿನ್ ಬಸ್ರೂರು, ತಮ್ಮ ವಿಶಿಷ್ಟ ಸಂಗೀತದ ಮೂಲಕ 'ಕರಾವಳಿ'ಯ ವೈಭವವನ್ನು ಎತ್ತಿ ಹಿಡಿದಿದ್ದಾರೆ. ಈ ಹಾಡು ಚಿತ್ರದ ಯಾವ ಸನ್ನಿವೇಶದಲ್ಲಿ ಬರಲಿದೆ ಎಂಬುದು ಈಗ ಸಿನಿ ರಸಿಕರ ಪಾಲಿಗೆ ದೊಡ್ಡ ಕುತೂಹಲವಾಗಿದೆ.

ದೊಡ್ಡ ಗಾಯಕರ ದಂಡೇ 'ಕರಾವಳಿ'ಯ ಸಾಥ್

'ಕರಾವಳಿ' ಚಿತ್ರದ ಸಂಗೀತದ ವಿಶೇಷತೆಯೇ ಎಂದರೆ, ಇಲ್ಲಿನ ಹಾಡುಗಳಿಗೆ ಭಾರತದ ಖ್ಯಾತ ಗಾಯಕರು ಧ್ವನಿಯಾಗಿರುವುದು. ಸಿದ್ ಶ್ರೀರಾಮ್, ಸಾಯಿ ವಿಗ್ನೇಶ್, ಆಬಿ ಮತ್ತು ಹಿರಿಯ ಗಾಯಕಿ ಬಿ. ಜಯಶ್ರೀ ಸೇರಿದಂತೆ ಅನೇಕ ಪ್ರತಿಭಾವಂತರು ಈ ಚಿತ್ರದ ಹಾಡುಗಳಿಗೆ ಜೀವ ತುಂಬಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ 'ಮುದ್ದು ಗುಮ್ಮ...' ಎಂಬ ರೊಮ್ಯಾಂಟಿಕ್ ಮೆಲೋಡಿ ಹಾಡು ಹಾಗೂ 'ಸೋಲ್ ಆಫ್ ಕರಾವಳಿ' ಹಾಡುಗಳು ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪ್ರೇಕ್ಷಕರ ಪ್ಲೇ ಲಿಸ್ಟ್‌ನಲ್ಲಿ ಜಾಗ ಪಡೆದುಕೊಂಡಿವೆ. ಇದೀಗ ಆ ಸಾಲಿಗೆ 'ಓಡಾ...' ಕೂಡ ಸೇರಿಕೊಂಡಿದ್ದು, ಸಿನಿಮಾದ ಆಲ್ಬಮ್‌ಗೆ ಇನ್ನಷ್ಟು ಮೆರುಗು ನೀಡಿದೆ.

ಚಿತ್ರದ ತಾರಾಗಣ ಮತ್ತು ನಿರ್ಮಾಣ

'ಕರಾವಳಿ' ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಅದರಲ್ಲಿ ನಟಿಸಿರುವ ಸ್ಟಾರ್ ನಟರು. ಚಂದನವನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ವಿಭಿನ್ನ ನಟನೆಯಿಂದಲೇ ದೇಶಾದ್ಯಂತ ಗುರುತಿಸಿಕೊಂಡಿರುವ ರಾಜ್ ಬಿ. ಶೆಟ್ಟಿ ಅವರು ಮೊದಲ ಬಾರಿಗೆ ಈ ಚಿತ್ರದಲ್ಲಿ ಒಂದಾಗಿ ನಟಿಸುತ್ತಿದ್ದಾರೆ. ಇಬ್ಬರು ಪವರ್‌ಫುಲ್ ನಟರು ಪರದೆಯ ಮೇಲೆ ಮುಖಾಮುಖಿಯಾಗುತ್ತಿರುವುದು ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.

ಚಿತ್ರವನ್ನು ಪ್ರತಿಭಾವಂತ ನಿರ್ದೇಶಕ ಗುರುದತ್ ಗಾಣಿಗ ಅವರು ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ವಿಕೆ ಫಿಲ್ಮ್ ಅಸೋಸಿಯೇಷನ್ ಮೂಲಕ ಗಾಣಿಗ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ಹೊತ್ತುಕೊಂಡಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಸಂಪದಾ ಮತ್ತು ಸುಷ್ಮಿತಾ ಅಭಿನಯಿಸಿದ್ದು, ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಸೇರಿದಂತೆ ಅನುಭವಿ ನಟರ ದಂಡೇ ಚಿತ್ರದಲ್ಲಿದೆ.

'ಓಡಾ...' ಹಾಡಿನ ಬಿಡುಗಡೆಯ ನಂತರ ಸಿನಿಮಾದ ಬಗ್ಗೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಚಿತ್ರದ ಪ್ರಚಾರದ ತಂತ್ರಗಳು ಮತ್ತು ಹಾಡುಗಳ ಗುಣಮಟ್ಟ ನೋಡ್ತಿದ್ದರೆ, ಜುಲೈ 24 ಯಾವಾಗ ಬರಬಹುದು ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ತಾಂತ್ರಿಕವಾಗಿ ಅತ್ಯುತ್ತಮವಾಗಿ ಮೂಡಿಬಂದಿರುವ ಈ ಸಿನಿಮಾ, ಕರಾವಳಿಯ ಸೊಗಡನ್ನು, ಸಂಸ್ಕೃತಿಯನ್ನು ಮತ್ತು ರೋಚಕ ಕಥಾನಕವನ್ನು ತೆರೆ ಮೇಲೆ ತರಲಿದೆ ಎಂಬುದು ನಿರ್ದೇಶಕ ಗುರುದತ್ ಗಾಣಿಗ ಅವರ ಮಾತು.

Karavali

Comments

Sign in to comment
Please to leave a comment on this article.
Top Stories
Subscribe to Our Newsletter

Get the latest articles delivered to your inbox.

Rakul Preet Singh Enjoys a Lovely Outing with Her Boyfriend
Rakul Preet Singh Enjoys a Lovely Outing with Her Boyfriend