ಬಾಲಿವುಡ್ ಮತ್ತು ಪಂಜಾಬಿ ಚಿತ್ರರಂಗದಲ್ಲಿ ಇಂದು ದಿಲ್ಜಿತ್ ದುಸ್ಸಾಂಜ್ (Diljit Dosanjh) ಎಂದರೆ ಅದೊಂದು ಬ್ರ್ಯಾಂಡ್. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ವಿಶ್ವಮಟ್ಟದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಗಾಯಕ ಮತ್ತು ನಟ ಇವರು. ಇವರ ಲೈವ್ ಕಾನ್ಸರ್ಟ್‌ಗಳು (Live Concerts) ನಡೆಯುತ್ತವೆ ಎಂದರೆ ಸಾಕು, ಲಕ್ಷಾಂತರ ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಲು ಜನ ಮುಗಿಬೀಳುತ್ತಾರೆ. ಇಷ್ಟೊಂದು ಜನಪ್ರಿಯತೆ, ಹಣ, ಯಶಸ್ಸಿನ ಉತ್ತುಂಗದಲ್ಲಿರುವ ಈ ಸ್ಟಾರ್ ನಟ, ಚಿತ್ರವೊಂದಕ್ಕಾಗಿ ಕೇವಲ ಒಂದೇ ಒಂದು ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದರೆ ನೀವು ನಂಬುತ್ತೀರಾ? ಹೌದು, ಇದು ಅಕ್ಷರಶಃ ಸತ್ಯ.

ದಿಲ್ಜಿತ್ ದುಸ್ಸಾಂಜ್ ಅವರು ಅತ್ಯಂತ ಬದ್ಧತೆಯಿಂದ, ಭಾವನಾತ್ಮಕವಾಗಿ ಕನೆಕ್ಟ್ ಆಗಿ ನಟಿಸಿದ ಚಿತ್ರದ ಹೆಸರು ‘ಸತ್ಲಜ್’. ಆದರೆ ದುರಂತವೆಂದರೆ, ವರ್ಷಗಟ್ಟಲೆ ಶ್ರಮಪಟ್ಟು, ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಸಿದ್ಧಪಡಿಸಿದ ಈ ಸಿನಿಮಾ ಇಂದು ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ರಾಜಕೀಯ ಕಾರಣಗಳು ಮತ್ತು ಸೆನ್ಸಾರ್ ಮಂಡಳಿಯ ಕತ್ತರಿಯಿಂದಾಗಿ ಈ ಚಿತ್ರ ಬಿಡುಗಡೆಯ ಭಾಗ್ಯವನ್ನೇ ಕಾಣದೆ ಮೂಲೆ ಸೇರಿದೆ.
ವಿವಾದದ ಸುಳಿಗೆ ಸಿಲುಕಿದ ‘ಸತ್ಲಜ್’ ಸಿನಿಮಾ
‘ಸತ್ಲಜ್’ ಸಿನಿಮಾ ಆರಂಭದಿಂದಲೂ ಹಲವು ವಿಘ್ನಗಳನ್ನು ಎದುರಿಸುತ್ತಲೇ ಬಂದಿದೆ. ಇತ್ತೀಚೆಗಷ್ಟೇ ಈ ಚಿತ್ರ ದೊಡ್ಡ ವಿವಾದಕ್ಕೆ ಸಿಲುಕಿಕೊಂಡಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಈ ಸಿನಿಮಾಗೆ ಪ್ರಮಾಣ ಪತ್ರ ನೀಡಲು ಸಾರಾಸಗಟಾಗಿ ನಿರಾಕರಿಸಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗದ ಕಾರಣ, ಚಿತ್ರತಂಡ ಇದನ್ನು ಒಟಿಟಿ (OTT) ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಿತ್ತು. ಆದರೆ ಅಲ್ಲಿಯೂ ರಾಜಕೀಯ ಒತ್ತಡಗಳು ಮುಂದುವರಿದ ಕಾರಣ, ಬಿಡುಗಡೆಯಾದ ಕೇವಲ ಎರಡು ದಿನಗಳ ಒಳಗಾಗಿ ಒಟಿಟಿಯಿಂದಲೂ ಸಿನಿಮಾವನ್ನು ಜಾಗತಿಕವಾಗಿ ತೆಗೆದುಹಾಕಲಾಗಿದೆ.
ವರ್ಷಗಟ್ಟಲೆ ಚಿತ್ರೀಕರಣ ನಡೆಸಿ, ಸತ್ಯವನ್ನು ಜಗತ್ತಿಗೆ ತೋರಿಸಬೇಕು ಎಂದು ಹಂಬಲಿಸಿದ ಇಡೀ ತಂಡಕ್ಕೆ ಇದು ದೊಡ್ಡ ಆಘಾತವನ್ನು ನೀಡಿದೆ. ಸದ್ಯಕ್ಕೆ ಈ ಸಿನಿಮಾ ಯಾವುದೇ ಅಧಿಕೃತ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿಲ್ಲದೆ ಕಾನೂನು ಮತ್ತು ರಾಜಕೀಯ ಹೋರಾಟದ ಸುಲಿಗೆ ಸಿಲುಕಿದೆ.
ಏನಿದು ‘ಸತ್ಲಜ್’ ಚಿತ್ರದ ಕಥಾಹಂದರ
ಈ ಚಿತ್ರ ಇಷ್ಟೊಂದು ದೊಡ್ಡ ಮಟ್ಟದ ವಿವಾದ ಸೃಷ್ಟಿಸಲು ಅದರಲ್ಲಿರುವ ಕಥಾವಸ್ತುವೇ ಕಾರಣ. ‘ಸತ್ಲಜ್’ ಚಿತ್ರವು ಪಂಜಾಬ್‌ನ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ ಜಶ್ವಂತ್ ಸಿಂಗ್ ಖಲ್ರಾ ಅವರ ನೈಜ ಜೀವನದ ಆಧಾರದ ಮೇಲೆ ತೆರೆಕಂಡಿರುವ ಬಯೋಪಿಕ್ ಆಗಿದೆ.
ಯಾರೀ ಜಶ್ವಂತ್ ಸಿಂಗ್ ಖಲ್ರಾ
1990ರ ದಶಕದ ಮಧ್ಯಭಾಗದಲ್ಲಿ ಪಂಜಾಬ್‌ನಲ್ಲಿ ಭೀಕರ ಪರಿಸ್ಥಿತಿ ಇತ್ತು. ಜಶ್ವಂತ್ ಸಿಂಗ್ ಖಲ್ರಾ ಅವರು ಮೂಲತಃ ಒಬ್ಬ ಬ್ಯಾಂಕ್ ಕ್ಲರ್ಕ್ ಆಗಿದ್ದರು. ಆದರೆ ಸಾಮಾನ್ಯ ಉದ್ಯೋಗಿಯಾಗಿದ್ದರೂ ಅವರು ಮಾನವ ಹಕ್ಕುಗಳ ಪರವಾಗಿ ಧ್ವನಿ ಎತ್ತಿದರು. 1984 ಮತ್ತು 1994ರ ನಡುವೆ ಪಂಜಾಬ್‌ನಲ್ಲಿ ನಡೆದ ಆಂತರಿಕ ಕಲಹ ಹಾಗೂ ಪೊಲೀಸ್ ಕಾರ್ಯಾಚರಣೆಗಳ ಸಂದರ್ಭದಲ್ಲಿ ಸುಮಾರು 25,000 ಜನರ ಶವಸಂಸ್ಕಾರವನ್ನು ಅನಾಮಧೇಯವಾಗಿ ಮಾಡಲಾಗಿತ್ತು. ಈ ಕರಾಳ ಸತ್ಯದ ಬೆನ್ನತ್ತಿದ ಖಲ್ರಾ ಅವರು ಸುದೀರ್ಘ ತನಿಖೆ ನಡೆಸಿ ಆಘಾತಕಾರಿ ಸತ್ಯಗಳನ್ನು ಹೊರಗೆಳೆದಿದ್ದರು.
ತಮ್ಮ ತನಿಖೆಯ ಮೂಲಕ ವ್ಯವಸ್ಥೆಯ ನಿದ್ದೆ ಗೆಡಿಸಿದ್ದ ಜಶ್ವಂತ್ ಸಿಂಗ್ ಖಲ್ರಾ ಅವರನ್ನು 1995ರಲ್ಲಿ ಅಪಹರಿಸಲಾಯಿತು. ತದನಂತರ ನ್ಯಾಯಾಲಯದ ತೀರ್ಪಿನ ಪ್ರಕಾರ, ಅವರನ್ನು ಪೊಲೀಸ್ ಕಸ್ಟಡಿಯಲ್ಲಿಯೇ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು ಎಂಬುದು ಸಾಬೀತಾಯಿತು. ಇದೇ ಸೂಕ್ಷ್ಮ ಮತ್ತು ಕಣ್ಣೀರು ತರಿಸುವ ಕಥೆಯನ್ನು ‘ಸತ್ಲಜ್’ ಚಿತ್ರ ಒಳಗೊಂಡಿದೆ.
30 ನಿಮಿಷಗಳ ಕಥೆ ಕೇಳಿ ಕಣ್ಣೀರಿಟ್ಟಿದ್ದ ದಿಲ್ಜಿತ್
ಇತ್ತೀಚಿನ ಸಂವಾದವೊಂದರಲ್ಲಿ ಮಾತನಾಡಿರುವ ಚಿತ್ರದ ನಿರ್ದೇಶಕ ಹನಿ ತೆಹ್ರಾನ್, ನಟ ದಿಲ್ಜಿತ್ ದುಸ್ಸಾಂಜ್ ಅವರ ಬದ್ಧತೆ ಮತ್ತು ಈ ಚಿತ್ರದ ಜರ್ನಿ ಬಗ್ಗೆ ಕೆಲವು ಆಘಾತಕಾರಿ ಹಾಗೂ ರೋಮಾಂಚನಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನಿರ್ದೇಶಕ ತೆಹ್ರಾನ್ ಪ್ರಕಾರ, "ಖಲ್ರಾ ಅವರ ಪಾತ್ರದ ಬಗ್ಗೆ ಯೋಚಿಸಿದಾಗ ನನಗೆ ತಕ್ಷಣ ನೆನಪಿಗೆ ಬಂದಿದ್ದು ದಿಲ್ಜಿತ್ ಅವರ ಮುಖ ಮಾತ್ರ. 2021ರಲ್ಲಿ ನಾನು ದಿಲ್ಜಿತ್ ಅವರನ್ನು ಭೇಟಿಯಾಗಿ ಕೇವಲ 30 ನಿಮಿಷಗಳ ಕಾಲ ಈ ಸಿನಿಮಾದ ಕಥೆ ಮತ್ತು ನಾನು ನಡೆಸಿದ ಸಂಶೋಧನೆಯ ಬಗ್ಗೆ ವಿವರಿಸಿದೆ. ಜೊತೆಗೆ ಜಶ್ವಂತ್ ಸಿಂಗ್ ಖಲ್ರಾ ಅವರ ಒಂದು ಹಳೆಯ ಛಾಯಾಚಿತ್ರವನ್ನು ಅವರಿಗೆ ತೋರಿಸಿದೆ" ಎಂದು ನೆನಪಿಸಿಕೊಂಡಿದ್ದಾರೆ.
ಆ ಫೋಟೋ ನೋಡಿದ ತಕ್ಷಣ ದಿಲ್ಜಿತ್ ಭಾವುಕರಾದರಂತೆ. ಅಷ್ಟೇ ಅಲ್ಲದೆ, ತಕ್ಷಣವೇ ಕುರ್ಚಿಯಿಂದ ಎದ್ದು ನಿಂತು, ಸಿನಿಮಾದ ಸ್ಕ್ರಿಪ್ಟ್ ಅನ್ನು ಭಕ್ತಿಯಿಂದ ತಮ್ಮ ಹಣೆಗೆ ಮುಟ್ಟಿಸಿಕೊಂಡು ‘ವಾಹೇಗುರು’ (ದೇವರ ನಾಮಸ್ಮರಣೆ) ಎಂದರಂತೆ. ಅಂದೇ ಅವರು ಈ ಸಿನಿಮಾದಲ್ಲಿ ತಾವೇ ನಟಿಸಬೇಕು ಮತ್ತು ಪಂಜಾಬ್‌ನ ಈ ನೈಜ ನೋವಿನ ಕಥೆ ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಪಣತೊಟ್ಟಿದ್ದರು.
ಸಂಭಾವನೆ ವಿಷಯದಲ್ಲಿ ದಿಲ್ಜಿತ್ ತೋರಿದ ಔದಾರ್ಯ
ಜಶ್ವಂತ್ ಸಿಂಗ್ ಖಲ್ರಾ ಅವರ ಪಾತ್ರದಲ್ಲಿ ನಟಿಸಲು ದಿಲ್ಜಿತ್ ಒಪ್ಪಿಕೊಂಡಾಗ ಸಂಭಾವನೆಯ ಮಾತುಕತೆ ಬಂದಿತು. ಕೋಟಿ ಕೋಟಿ ರೂಪಾಯಿ ಬೇಡಿಕೆ ಇಡುವ ಈ ಜಾಗತಿಕ ತಾರೆ ಅಂದು ಹೇಳಿದ ಮಾತು ಇಡೀ ಚಿತ್ರತಂಡವನ್ನು ಚಕಿತಗೊಳಿಸಿತ್ತು.
ದಿಲ್ಜಿತ್ ನಿರ್ದೇಶಕರಲ್ಲಿ, "ಖಲ್ರಾ ಅವರಂತಹ ಮಹಾನ್ ವ್ಯಕ್ತಿಯ, ಹುತಾತ್ಮನ ಪಾತ್ರವನ್ನು ನಿರ್ವಹಿಸಲು ನಾನು ಹೇಗೆ ತಾನೇ ಹಣ ಪಡೆಯಲಿ? ಹಾಗೆ ಹಣ ಪಡೆದರೆ ಅದು ನಾಚಿಕೆಗೇಡಿನ ವಿಷಯವಾಗುತ್ತದೆ" ಎಂದು ಹಣ ಪಡೆಯಲು ನಿರಾಕರಿಸಿದರು. ಆದರೆ ಕಾನೂನಾತ್ಮಕ ಒಪ್ಪಂದಕ್ಕೆ (Agreement) ಸಹಿ ಹಾಕಲು ಏನಾದರೂ ಪಾವತಿಸಲೇಬೇಕು ಎಂದು ನಿರ್ದೇಶಕರು ಒತ್ತಾಯಿಸಿದಾಗ, ದಿಲ್ಜಿತ್ ಕೇವಲ 1 ರೂಪಾಯಿ ಸಂಭಾವನೆಯನ್ನು ಮಾತ್ರ ಪಡೆದುಕೊಂಡರು.
ನಿರ್ದೇಶಕ ಹನಿ ತೆಹ್ರಾನ್ ಈ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ
"ದಿಲ್ಜಿತ್ ಇಲ್ಲದೆ ಈ ಚಿತ್ರ ಅಸ್ತಿತ್ವಕ್ಕೆ ಬರುತ್ತಲೇ ಇರಲಿಲ್ಲ. ಆ ಜಗತ್ತನ್ನು, ಆ ಜನರ ನೋವನ್ನು ಅರ್ಥಮಾಡಿಕೊಂಡಿರುವ ಸಿಖ್ ನಟನ ಅಗತ್ಯವೇ ನನಗಿತ್ತು. ನಾನು ಬಾಲಿೌಡ್‌ನ ಬೇರೆ ಯಾವುದಾದರೂ ಪ್ರಸಿದ್ಧ ನಟನನ್ನು ಈ ಪಾತ್ರಕ್ಕೆ ಹಾಕಿದ್ದರೆ, ಅದು ಕೇವಲ 'ಒಬ್ಬ ನಟ ಸಿಖ್ ವ್ಯಕ್ತಿಯಾಗಿ ನಟಿಸುತ್ತಿದ್ದಾನೆ' ಎಂಬ ಚರ್ಚೆಗೆ ದಾರಿ ಮಾಡಿಕೊಡುತ್ತಿತ್ತು. ಆದರೆ ಅದು ಖಲ್ರಾ ಸಾಹೇಬರ ಹೋರಾಟಕ್ಕೆ ಮತ್ತು ಈ ಕಥೆಯು ಹೊತ್ತಿರುವ ಸಾವಿರಾರು ಜನರ ನೋವಿಗೆ ನಾವು ಮಾಡುವ ಅನ್ಯಾಯವಾಗುತ್ತಿತ್ತು."
ಶೂಟಿಂಗ್ ಸೆಟ್‌ನಲ್ಲಿ ಮೂಡಿಬಂದ ಬದ್ಧತೆ
ಕೇವಲ ಕಡಿಮೆ ಸಂಭಾವನೆ ಪಡೆದಿದ್ದಷ್ಟೇ ಅಲ್ಲ, ಚಿತ್ರೀಕರಣದ ಉದ್ದಕ್ಕೂ ದಿಲ್ಜಿತ್ ದುಸ್ಸಾಂಜ್ ಅವರು ಅತ್ಯಂತ ವಿನಮ್ರವಾಗಿ ನಡೆದುಕೊಂಡರು. ಸ್ಟಾರ್ ನಟರಿಗಿರುವ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಚಿತ್ರಕ್ಕೆ ಸಂಪೂರ್ಣ ಬೆಂಬಲ ನೀಡಿದರು.
"ಕೆಲವು ದಿನಗಳ ಚಿತ್ರೀಕರಣದ ಸಂದರ್ಭದಲ್ಲಿ ದಿಲ್ಜಿತ್ ಅವರು ಬೆಳಿಗ್ಗೆ 6 ಗಂಟೆಗೇ ಬಂದು ಸೆಟ್‌ನಲ್ಲಿ ಹಾಜರಿರುತ್ತಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಅಥವಾ ವೇಳಾಪಟ್ಟಿ ಏರುಪೇರಾದ ಕಾರಣ ಸಂಜೆ 4 ಗಂಟೆಯವರೆಗೂ ಅವರ ಮೊದಲ ಶಾಟ್ ತೆಗೆದುಕೊಳ್ಳಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ಒಬ್ಬ ದೊಡ್ಡ ಸ್ಟಾರ್ ಅನ್ನು ದಿನಪೂರ್ತಿ ಕಾಯಿಸಿದ್ದಕ್ಕೆ ನಾನು ಪದೇ ಪದೇ ಅವರಲ್ಲಿ ಕ್ಷಮೆಯಾಚಿಸುತ್ತಿದ್ದೆ. ಆದರೆ ಪ್ರತಿ ಬಾರಿಯೂ ಅವರು ಮುಗುಳ್ನಗುತ್ತಾ, ‘ಪಾಜಿ (ಅಣ್ಣ), ತೊಂದರೆಯಿಲ್ಲ. ನೀವು ಏನೇ ಮಾಡುತ್ತಿದ್ದರೂ ಅದು ಚಿತ್ರದ ಒಳ್ಳೆಯದಕ್ಕಾಗಿಯೇ ಮಾಡುತ್ತಿದ್ದೀರಿ. ಚಿತ್ರವನ್ನು ಬೆಂಬಲಿಸಲು ನಾನು ಯಾವಾಗಲೂ ಇಲ್ಲೇ ಇರುತ್ತೇನೆ’ ಎಂದು ಬೆನ್ನುತಟ್ಟುತ್ತಿದ್ದರು," ಎಂದು ನಿರ್ದೇಶಕರು ಭಾವುಕರಾಗಿ ನೆನಪಿಸಿಕೊಂಡಿದ್ದಾರೆ.
Comments
Please to leave a comment on this article.