ಚಿತ್ರರಂಗದಲ್ಲಿ ಸಿನಿಮಾ ಪ್ರಚಾರದ ವೇಳೆ ನಟ-ನಟಿಯರು ತಮಾಷೆ ಮಾಡುವುದು ಹೊಸದೇನಲ್ಲ. ಆದರೆ, ಕೆಲವೊಮ್ಮೆ ಸ್ಟಾರ್ ಜೋಡಿಗಳ ವೈಯಕ್ತಿಕ ವಿಚಾರ ಹಾಗೂ ರಾಜಕೀಯ ಬೆಳವಣಿಗೆಗಳನ್ನು ಇಟ್ಟುಕೊಂಡು ಮಾಡುವ ಹಾಸ್ಯ ಭಾರಿ ಚರ್ಚೆಗೆ ಗ್ರಾಸವಾಗುತ್ತದೆ. ಸದ್ಯ ಮಲಯಾಳಂ ಚಿತ್ರರಂಗದ ಖ್ಯಾತ ನಟ ಧ್ಯಾನ್ ಶ್ರೀನಿವಾಸನ್ (Dhyan Sreenivasan) ಅವರು ತಮಿಳು ಚಿತ್ರರಂಗದ ದಳಪತಿ ವಿಜಯ್ ಹಾಗೂ ನಟಿ ತ್ರಿಷಾ ಕೃಷ್ಣನ್ (Vijay - Trisha) ಅವರ ಕಾಲೆಳೆಯುವ ಮೂಲಕ ದಕ್ಷಿಣ ಭಾರತದಾದ್ಯಂತ ಭಾರಿ ಸುದ್ದಿಯಾಗಿದ್ದಾರೆ.

ಧ್ಯಾನ್ ಶ್ರೀನಿವಾಸನ್ ತಮ್ಮ ಮುಂಬರುವ ಚಿತ್ರ 'ವಿಸಿಟರ್' ಪ್ರಚಾರದ ವೇಳೆ ವೇದಿಕೆಯಲ್ಲೇ ದಳಪತಿ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವಿಷಯವನ್ನು ಪ್ರಸ್ತಾಪಿಸಿ ಅಣಕಿಸಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮುಂಬರುವ ‘ವಿಸಿಟರ್’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧ್ಯಾನ್ ಶ್ರೀನಿವಾಸನ್ ತಮ್ಮ ಎಂದಿನ ಹಾಸ್ಯಭರಿತ ಶೈಲಿಯಲ್ಲಿ ಮಾತು ಆರಂಭಿಸಿದರು. ಇತ್ತೀಚೆಗೆ ತಮಗೆ ಸಿನಿಮಾಗಳಿಗಿಂತ ವೇದಿಕೆ ಕಾರ್ಯಕ್ರಮಗಳು ಹಾಗೂ ಜಾಹೀರಾತುಗಳಲ್ಲೇ ಹೆಚ್ಚು ಆಸಕ್ತಿ ಮೂಡುತ್ತಿದೆ ಎಂದು ಹಾಸ್ಯ ಮಾಡಿದರು.
ಇದೇ ವೇಳೆ ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮವೊಂದನ್ನು ನೆನಪಿಸಿಕೊಂಡ ಧ್ಯಾನ್, "ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾದಾಗ, ಮುಂದಿನ 15 ವರ್ಷಗಳ ಕಾಲ ಅವರ ಹೆಜ್ಜೆಗಳನ್ನು ಅನುಸರಿಸಲು ನಾನು ತೀರ್ಮಾನಿಸಿದ್ದೇನೆ" ಎಂದು ತಮಾಷೆ ಮಾಡಿದರು.
ತಮ್ಮದೇ ಸಿನಿಮಾದ ಸಹನಟ ಹಾಗೂ ಆತ್ಮೀಯ ಗೆಳೆಯ ಅಜು ವರ್ಗೀಸ್ ಅವರನ್ನು ಕಾಲೆಳೆದ ಧ್ಯಾನ್, "ನನ್ನ ಗೆಳೆಯ ಅಜು ವರ್ಗೀಸ್ ನನಗೆ ಮೊದಲು ಕಲಾವಿದರ ಸಂಘದ ಪ್ರೆಸಿಡೆಂಟ್ ಆಗು, ಆಮೇಲೆ ಸಮಾಜ ಸೇವೆ ಮಾಡಿ ಜನರನ್ನು ಒಲಿಸಿಕೊಂಡು ಸಿಎಂ ಆಗು ಎಂದು ಸಲಹೆ ನೀಡಿದ್ದ. ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಫೋನ್ ಮಾಡಿ, ಕಲಾವಿದರ ಸಂಘದಲ್ಲಿ ಭಾರಿ ವಿವಾದಗಳು ನಡೆಯುತ್ತಿವೆ. ನೀನು ಸಿಎಂ ಅಥವಾ ಪ್ರೆಸಿಡೆಂಟ್ ಯಾವುದೂ ಆಗಬೇಡ. ನಿನಗೆ ಗವರ್ನರ್ ಹುದ್ದೆಯೇ ಬೆಸ್ಟ್. ಅಲ್ಲಿ ಅಷ್ಟಾಗಿ ಕೆಲಸ ಇರಲ್ಲ ಅಂತ ಕಾಲೆಳೆದಿದ್ದ," ಎಂದಾಗ ಇಡೀ ಪ್ರೇಕ್ಷಕರು ನಗೆಗಡಲಿನಲ್ಲಿ ಮುಳುಗಿದರು.
ಮುಂದುವರಿದು ಮಾತನಾಡಿದ ಧ್ಯಾನ್ ಶ್ರೀನಿವಾಸನ್, ವೇದಿಕೆಯಲ್ಲೇ ಇದ್ದ ತಮ್ಮ ಸಹನಟಿ ನವ್ಯಾ ನಾಯರ್ ಅವರ ಕಾಲು ಎಳೆದರು. "ಬಹಳ ದಿನಗಳ ನಂತರ ನಾವು ಒಂದು ಚಿತ್ರಕ್ಕಾಗಿ ಒಟ್ಟಿಗೆ ಬರುತ್ತಿದ್ದೇವೆ. ನವ್ಯಾ ಮದುವೆಯಾಗಿ ಈಗ ಒಬ್ಬ ಮಗನಿದ್ದಾನೆ. ಹಾಗಿದ್ದರೂ, ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ, ನವ್ಯಾ ಮುಂದಿನ ಸಾಲಿನಲ್ಲಿ ಸೀರೆ ಉಟ್ಟು, ಕಣ್ಣಲ್ಲಿ ನೀರು ತುಂಬಿಕೊಂಡು ಕುಳಿತುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಪರೋಕ್ಷವಾಗಿ ದಳಪತಿ ವಿಜಯ್ ಮತ್ತು ತ್ರಿಷಾ ನಡುವಿನ ಪ್ರಸಂಗವನ್ನು ಅಣಕಿಸಿದರು.
ಧ್ಯಾನ್ ಅವರ ಈ ತಮಾಷೆಗೆ ನಟಿ ನವ್ಯಾ ನಾಯರ್ ಕೂಡ ಅಷ್ಟೇ ಚುರುಕಾಗಿ ಪ್ರತಿಕ್ರಿಯಿಸಿದರು. ವೇದಿಕೆ ಏರಿದ ನವ್ಯಾ,
"ಧ್ಯಾನ್, ನೀವು ಚಿಂತಿಸಬೇಡಿ. ನೀವು ಮುಖ್ಯಮಂತ್ರಿಯಾದಾಗ, ನಿಮ್ಮ ಇಚ್ಛೆಯಂತೆ ನಾನು ವಜ್ರದ ಹಾರವಿರುವ ಬಿಳಿ ಸೀರೆಯನ್ನು ಉಟ್ಟು, ಮುಂದಿನ ಸಾಲಿನಲ್ಲಿ ಕಣ್ಣೀರಿನೊಂದಿಗೆ ಕುಳಿತು, ವಿಜಯ ಘೋಷಣೆಗಳೊಂದಿಗೆ ನಿಮ್ಮನ್ನು ಹುರಿದುಂಬಿಸುತ್ತೇನೆ. ಆದರೆ ಮುಂದಿನ ಸಾಲಿನಲ್ಲಿ ನನಗೆ ಆಸನ ವ್ಯವಸ್ಥೆ ಮಾಡುತ್ತೀರಾ?" ಎಂದು ಮರುಪ್ರಶ್ನೆ ಹಾಕಿ ಧ್ಯಾನ್ ಅವರ ಕಾಲೆಳೆದರು.
ಧ್ಯಾನ್ ಶ್ರೀನಿವಾಸನ್ ವೇದಿಕೆಯ ಮೇಲೆ ಇಷ್ಟೆಲ್ಲಾ ಹಂಗಾಮಾ ಮಾಡಲು ಒಂದು ಬಲವಾದ ಹಿನ್ನೆಲೆ ಇತ್ತು. ಕಳೆದ ಕೆಲವು ಸಮಯದಿಂದ ತಮಿಳು ನಟ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇದೇ ಸಮಯದಲ್ಲಿ ನಟಿ ತ್ರಿಷಾ ಜೊತೆಗಿನ ವಿಜಯ್ ಸ್ನೇಹ ತಮಿಳುನಾಡು ಹಾಗೂ ಇಡೀ ದಕ್ಷಿಣ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಇತ್ತೀಚೆಗೆ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಐತಿಹಾಸಿಕ ಸಮಾರಂಭದಲ್ಲಿ, ನಟಿ ತ್ರಿಷಾ ಕೃಷ್ಣನ್ ಅವರು ವಿಜಯ್ ಅವರ ತಂದೆ-ತಾಯಿಯ ಪಕ್ಕದಲ್ಲೇ ಮುಂಭಾಗದ ಸಾಲಿನಲ್ಲಿ ಕುಳಿತುಕೊಂಡಿದ್ದರು. ಆ ಸುದೀರ್ಘ ಸಮಾರಂಭದಲ್ಲಿ ತ್ರಿಷಾ ಅವರು ಭಾವುಕರಾಗಿ ಕಣ್ಣೀರು ಹಾಕಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಆಗಿದ್ದವು. ಇದೇ ಘಟನೆಯನ್ನು ಧ್ಯಾನ್ ಶ್ರೀನಿವಾಸನ್ ತಮ್ಮದೇ ಆದ ಮಲಯಾಳಂ ಶೈಲಿಯಲ್ಲಿ ಅಣಕಿಸಿದ್ದು, ಸದ್ಯ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಧ್ಯಾನ್ ಶ್ರೀನಿವಾಸನ್ ಅವರು ವೇದಿಕೆಯ ಮೇಲೆ ವಿಜಯ್ ಅವರ ಪ್ರಮಾಣ ವಚನ ಹಾಗೂ ತ್ರಿಷಾ ಅವರ ಕಣ್ಣೀರಿನ ವಿಚಾರ ಇಟ್ಟುಕೊಂಡು ಭರ್ಜರಿ ಕಾಮಿಡಿ ಮಾಡಿದ ನಂತರ, ವೇದಿಕೆ ಏರಿದ ಮತ್ತೊಬ್ಬ ಜನಪ್ರಿಯ ನಟ ಅಜು ವರ್ಗೀಸ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು.
ದಳಪತಿ ವಿಜಯ್ ಅವರ ತಮಿಳುನಾಡಿನ ಅಪಾರ ಅಭಿಮಾನಿ ಬಳಗ ಹಾಗೂ ಅವರ ರಾಜಕೀಯ ವರ್ಚಸ್ಸನ್ನು ಗಮನದಲ್ಲಿಟ್ಟುಕೊಂಡು, ಅಜು ವರ್ಗೀಸ್ ಅವರು ಕಾರ್ಯಕ್ರಮದ ವೇದಿಕೆಯ ಮೇಲಿಂದಲೇ ತಮಿಳು ನಟ ವಿಜಯ್ ಅವರ ಬಳಿ ನೇರವಾಗಿಯೇ ಕ್ಷಮೆ ಕೇಳಿದರು. ಇದು ಕೇವಲ ಪ್ರಚಾರಕ್ಕಾಗಿ ನಡೆದ ಹಾಸ್ಯ ಸನ್ನಿವೇಶವೇ ಹೊರತು ಯಾರಿಗೂ ನೋವುಂಟು ಮಾಡುವ ಉದ್ದೇಶ ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಸದ್ಯ ಈ ಇಡೀ ಹಾಸ್ಯದ ವಿಡಿಯೋ ಕ್ಲಿಪ್ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ.
Comments
Please to leave a comment on this article.